ಕಾಡುಬುಡುಮೆ

ಹೊಲ ಮತ್ತು ತೋಟಗಳಲ್ಲಿ ಸ್ವಾಭಾವಿಕವಾಗಿ ಕಳೆಯಂತೆ ಬೆಳೆಯುವ ಒಂದು ಬಳ್ಳಿ. ಬುಡುಮೆ ಪರ್ಯಾಯನಾಮ. ಇದು ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದೆ. ಕುಕುಮಿಸ್ ಟ್ರೈಗೋನಸ್ ಇದರ ಶಾಸ್ತ್ರೀಯ ಹೆಸರು. ನೆಲದ ಮೇಲೆ 5'-6' ಉದ್ದವಾಗಿ ಹರಿದು ಬೆಳೆಯುವ (ಕ್ರೀಪಿಂಗ್) ಏಕವಾರ್ಷಿಕ (ಆನ್ಯೂಯಲ್) ಬಳ್ಳಿಯಿದು. ಎಲೆಗಳು ಕಂಕುಳಲ್ಲಿರುವ ಕುಡಿಗಳಿಂದ (ಟೆಂಡ್ರಿಲ್) ಹಬ್ಬಿ ಬೆಳೆಯುತ್ತದೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಹಸ್ತದಂತೆ. ಹೂಗಳು ಭಿನ್ನಲಿಂಗಿಗಳು. ಗಂಡು ಹೂಗಳು ಮಧ್ಯಾರಂಭಿ (ಸೈಮೋಸ್) ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೆಣ್ಣುಹೂಗಳು ಒಂಟೊಂಟಿಯಾಗಿವೆ. ದಳಗಳ ಸಂಖ್ಯೆ 5. ಇವೂ ಪರಸ್ಪರ ಕೂಡಿಕೊಂಡಿವೆ. ಇವುಗಳ ಬಣ್ಣ ಹಳದಿ. ಗಂಡು ಹೂವಿನಲ್ಲಿ 3 ಕೇಸರಗಳೂ ಹೆಣ್ಣು ಹೂವಿನಲ್ಲಿ ಮೂರು ಕಾರ್ಪೆಲುಗಳಿಂದ ಕೂಡಿದ ನೀಚಸ್ಥಾನದ ಅಂಡಾಶಯವೂ ಇವೆ. ಫಲ ಬೆರಿ ಮಾದರಿಯದು. ಸಿಪ್ಪೆ ನಯವಾಗಿಯೋ ಇಲ್ಲವೆ ಸಣ್ಣ ಸಣ್ಣ ಮುಳ್ಳುಗಳಿಂದ ಕೂಡಿಯೋ ಇದೆ. ಬೀಜಗಳು ಅಸಂಖ್ಯ. ಇದರ ಹಣ್ಣು ತಿನ್ನಲು ಬಹಳ ರುಚಿಯಾಗಿರುತ್ತದೆ. ಕಾಡುಬುಡುಮೆ ಸಸ್ಯದ ಎಲ್ಲ ಭಾಗಗಳು ಔಷಧಿ ಪ್ರಾಮುಖ್ಯವನ್ನು ಪಡೆದಿವೆ. ಇದರ ಕಾಯಿಗಳನ್ನು ಉಪ್ಪಿನಕಾಯಿಗಾಗಿ ಉಪಯೋಗಿಸುತ್ತಾರೆ. ಎಳೆಯ ಎಲೆಗಳನ್ನು ಸೊಪ್ಪು ತರಕಾರಿಯಾಗಿ ಬಳಸುತ್ತಾರೆ. ಇದು ಜಾನುವಾರುಗಳಿಗೆ ಉತ್ತಮ ಮೇವೂ ಹೌದು.

(ಡಿ.ಎಂ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ